ಅಚ್ಚು, ಎರಕದ

 ಕರಗಿದ ಪದಾರ್ಥವನ್ನು (ಲೋಹ, ಪಾಕ ಇತ್ಯಾದಿ) ಎರಕ ಹೊಯ್ದ ಬೇಕಾದ ಆಕೃತಿಗಳನ್ನು ಸಿದ್ಧಮಾಡಲು ಉಪಯೋಗಿಸುವ ಮೂಲಮಾತೃಕೆಗಳಿಗೆ ಈ ಹೆಸರಿದೆ. ಅದನ್ನು ತಯಾರಿಸುವ ವಿಧಾನವನ್ನು ಮುಂದಿನ ಚಿತ್ರಗಳ ಸಹಾಯದಿಂದ ತಿಳಿದುಕೊಳ್ಳಬಹುದು.

 ನಮಗೆ ಬೇಕಾದ ಎರಕದ ಮಾದರಿಯನ್ನು (ಚಿತ್ರ 1) ಒಂದು ಮಣೆಯ ಮೇಲೆ, ತಲ ಮತ್ತು ಮುಚ್ಚಳವಿಲ್ಲದ ಒಂದು ಪೆಟ್ಟಿಗೆಯಲ್ಲಿಟ್ಟು ಸುತ್ತಲೂ ಅಚ್ಚಿನ ಮರಳನ್ನು ಘಟ್ಟಿಸಲಾಗಿದೆ. ಘಟ್ಟಿಸುವ ಕೆಲಸವನ್ನು ಕೈಯಿಂದ ಇಲ್ಲವೆ ಘಟ್ಟಿಸುವ ಯಂತ್ರಗಳಿಂದ ಮಾಡಬಹುದು (ಚಿತ್ರ 2). ಮಾದರಿ ಮತ್ತು ಘಟ್ಟಿಸಿದ ಮರಳಿನ ಸಮೇತ ಈ ಪೆಟ್ಟಿಗೆಯನ್ನು ತಿರುಗಿಸಿ ಇದರ ಮೇಲೆ ಇನ್ನೊಂದು ತಳ ಮತ್ತು ಮುಚ್ಚಳವಿಲ್ಲದ ಪೆಟ್ಟಿಗೆಯನ್ನಿಟ್ಟು (ಮೇಲಿನ ಪೆಟ್ಟಿಗೆ) ಅದರಲ್ಲು ಅಚ್ಚಿನ ಮರಳನ್ನು ಘಟ್ಟಿಸಲಾಗಿದೆ. ಮೇಲಿನ ಪೆಟ್ಟಿಗೆಯ ಮರಳಿನಲ್ಲಿ ಇಳಿಕೊಳವಿ ಮತ್ತು ಏರುಕೊಳವಿ ಎಂಬ ನಳಿಕೆಗಳನ್ನು ಬಿಡಲಾಗಿದೆ (ಚಿತ್ರ 3). ಕರಗಿದ ಲೋಹ ಇಳಿ ಕೊಳವೆಯಿಂದ ಅಚ್ಚಿನೊಳಗಿಳಿದು ಏರುಕೊಳವಿಯಿಂದ ಮೇಲಕ್ಕೆ ಬರುತ್ತದೆ. ಅಲ್ಲದೆ ಲೋಹ ಆರಿಕುಗ್ಗುತ್ತಿರುವಾಗ, ಏರುಕೊಳವಿಯಲ್ಲಿನ ದಾಸ್ತಾನು ಉಪಯೋಗಕ್ಕೆ ಬರುತ್ತದೆ. ಈಗ ಮೇಲಿನ ಪೆಟ್ಟಿಗೆಯನ್ನು ಜೋಪಾನವಾಗಿ ತೆಗೆದಿಟ್ಟು, ಕೆಳಗಿನ ಪೆಟ್ಟಿಗೆಯ ಮೇಲ್ಭಾಗದಲ್ಲಿರುವ ಮಾದರಿಯನ್ನು ಜೋಪಾನವಾಗಿ ಹೊರತೆಗೆಯಬೇಕು. ಅನಂತರ ಮೇಲಿನ ಪೆಟ್ಟಿಗೆಯನ್ನು ಕೆಳಗಿನ ಪೆಟ್ಟಿಗೆಯ ಮೇಲೆ ಇಡಬೇಕು.

 

ಚಿತ್ರ-1

 

 ದ್ರವರೂಪ ಲೋಹದ ಒತ್ತಡದ ಪ್ರಭಾವದಿಂದ ಮೇಲಿನ ಪೆಟ್ಟಿಗೆ ಅದರ ಜಾಗದಿಂದ ಸರಿಯುವುದನ್ನು ತಪ್ಪಿಸುವುದಕ್ಕಾಗಿ, ಅದರ ಮೇಲೆ ಭಾರ ಹೊರಿಸಬೇಕು. ಇದಾದ ಅನಂತರ ಅಚ್ಚು ಎರಕ ಹೊಯ್ಯಲು ಸಿದ್ಧವಾಗುತ್ತದೆ.

 ಅಚ್ಚು ಹಾಕಲು ಉಪಯೋಗಿಸುವ ಮರಳು ವಿಶೇಷ ಬಗೆಯದಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ನದೀ ಮರಳು, ಜೇಡಿಮಣ್ಣು ಮತ್ತು ನೀರು ಇರುತ್ತವೆ. ಈ ಮರಳಿಗೆ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯಿದೆ. ಅಲ್ಲದೆ ನದಿ ಮರಳಿನ ಕಣಗಳನ್ನು ಒಂದಕ್ಕೊಂದು ಅಂಟಿಸಿ, ಘಟ್ಟಿಸಿದಾಗ ಯಾವ ರೂಪದಲ್ಲಾದರೂ ನಿಲ್ಲುವ ಗುಣವನ್ನು ಮರಳಿಗೆ ಕೊಡುವ ಶಕ್ತಿಯೂ ಇದೆ. ಮಣ್ಣಿನ ಅಂಟುಗುಣ ಕಾರ್ಯರೂಪಕ್ಕೆ ಬರುವುದು ನೀರು ಸೇರಿದಾಗ ಮಾತ್ರ. ಆದರೆ ನೀರು ಹೆಚ್ಚಾದರೆ ಎರಕದಲ್ಲಿ ದೋಷಗಳುಂಟಾಗುತ್ತದೆ.

 ಅತಿಸೂಕ್ಷ್ಮವಾದ ವಸ್ತುಗಳನ್ನು ಎರಕ ಹೊಯ್ಯಲು ಮತ್ತು ಎರಕದ ಮೈ ಬಹಳ ನುಣುಪಾಗಿರಬೇಕಾದ ಮರಳಿಗೆ ಬದಲು ಬೇರೆ ವಸ್ತುಗಳನ್ನು ಎರಕ ಹೊಯ್ಯಲು ಉಪಯೋಗಿಸುತ್ತಾರೆ. ಷೆಲ್ ಎರಕದಲ್ಲಿ (ಷೆಲ್ ಮೌಲ್ಡಿಂಗ್) ರಾಳಗಳನ್ನು, ಲಾಸ್ಟ್‍ವ್ಯಾಕ್ಸ್ ವಿಧಾನದಲ್ಲಿ ಮೇಣವನ್ನು, ಪ್ಲಾಸ್ಟರ್ ಎರಕದಲ್ಲಿ ಪ್ಲಾಸ್ಟರ್ ಆಫ್ó ಪ್ಯಾರಿಸ್ಸನ್ನು ಮತ್ತು ಛಾಪ ಎರಕದ ಪದ್ಧತಿಯಲ್ಲಿ (ಡೈಕ್ಯಸ್ಟಿಂಗ್) ಲೋಹದ ಅಚ್ಚುಗಳನ್ನೂ ಉಪಯೋಗಿಸುತ್ತಾರೆ.

(ವೈ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ